ಎಂಗ್ಲರ್, ಹೆನ್ರಿಕ್ ಗಸ್ಟಾಫ್ ಅಡಾಲ್ಫ್

	1844-1930. ಜರ್ಮನ್ ಸಸ್ಯವಿe್ಞÁನಿ. ಸಸ್ಯವರ್ಗೀಕರಣಪದ್ಧತಿ ಮತ್ತು ಸಸ್ಯಗಳ ಭೌಗೋಳಿಕ ವ್ಯಾಪನೆಯ ಶಾಸ್ತ್ರದಲ್ಲಿ ಪರಿಣಿತನೆಂದು ವಿಖ್ಯಾತನಾದವ. ಜರ್ಮನಿಯ ಸಾಗನ್ ಎಂಬಲ್ಲಿ 1844ರ ಮಾರ್ಚಿ 25ರಂದು ಜನಿಸಿದ. ಬ್ರೆಸ್ಲೊ ವಿಶ್ವವಿದ್ಯಾನಿಲಯದಿಂದ 1863ರಲ್ಲಿ ಬ್ಯಾಚುಲರ್ ಪದವಿಯನ್ನೂ 1866ರಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನೂ ಪಡೆದು ಆಮೇಲೆ ನಾಲ್ಕು ವರ್ಷಕಾಲ ಅಧ್ಯಾಪಕನಾಗಿ ಕೆಲಸಮಾಡಿದ. 1871 ರಿಂದ 1878ರ ವರೆಗೆ ಮ್ಯೂನಿಕ್‍ನ ಬೊಟಾನಿಕಲ್ ಇನ್ಸ್‍ಟಿಟ್ಯೂಟ್‍ನಲ್ಲಿ ಸಸ್ಯಸಂಗ್ರಹಗಳ ಪಾಲಕನಾಗಿದ್ದ. ಅನಂತರ ಕೀಲ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾಗಿದ್ದು 1884ರಲ್ಲಿ ಬ್ರೆಸ್ಲೊ ವಿಶ್ವವಿದ್ಯಾನಿಲಯದಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕ ಹಾಗೂ ಅಲ್ಲಿನ ಸಸ್ಯೋದ್ಯಾನದ ನಿರ್ದೇಶಕನಾಗಿ ನೇಮಕಗೊಂಡ. 1889ರಲ್ಲಿ ದಾಹ್ಲೆಮ್‍ನಲ್ಲಿರುವ ಬರ್ಲಿನ್ ಸಸ್ಯೋದ್ಯಾನದ ನಿರ್ದೇಶಕನಾದ. ಅಲ್ಲಿ 1921ರ ವರೆಗೂ ಇದ್ದು ಅತ್ಯಂತ ದಕ್ಷ ಆಡಳಿತಗಾರನೆನಿಸಿಕೊಂಡು ಆ ಉದ್ಯಾನದ ಖ್ಯಾತಿ ಪ್ರಪಂಚದ ಎಲ್ಲೆಡೆಗಳಲ್ಲೂ ಹರಡುವಂತೆ ಮಾಡಿದ. ಆ ಉದ್ಯಾನದ ನಿರ್ದೇಶಕನಾಗಿದ್ದ ಕಾಲದಲ್ಲಿ 1902, 1905 ಮತ್ತು 1913ರಲ್ಲಿ ಹೀಗೆ ಮೂರುಬಾರಿ ಸಸ್ಯಸಂಗ್ರಹಣ ಮತ್ತು ಸಂಶೋಧನೆಗಾಗಿ ಆಫ್ರಿಕ ಖಂಡದಲ್ಲಿ ಪ್ರವಾಸಮಾಡಿದ. 1905ರಲ್ಲಿ ಭಾರತ ಮತ್ತು ಜಾವ ದೇಶಗಳಿಗೂ ಭೇಟಿ ನೀಡಿದ. ಅಲ್ಲದೆ 1913ರಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನಗಳು, ರಷ್ಯ ಮತ್ತು ಜಪಾನ್ ದೇಶಗಳನ್ನೊಳಗೊಂಡಂತೆ ವಿಶ್ವಪರ್ಯಟನೆ ಮಾಡಿದ. 1930ರ ಅಕ್ಟೋಬರ್ 10ರಂದು ದಾಹ್ಲೆಮ್‍ನಲ್ಲಿ ನಿಧನನಾದ.

	ಸಸ್ಯವರ್ಗೀಕರಣ ಮತ್ತು ಭೌಗೋಳಿಕ ಸಸ್ಯಶಾಸ್ತ್ರದಲ್ಲಿ ಅಪಾರವಾದ ಪಾಂಡಿತ್ಯವನ್ನು ಪಡೆದಿದ್ದ. ಈತ ಸಸ್ಯಗಳ ಬಗ್ಗೆ ಆಳವಾಗಿ, ವಿಸ್ತಾರವಾಗಿ ಅಭ್ಯಾಸಮಾಡಿ ಹಲವಾರು ಪುಸ್ತಕಗಳನ್ನು ಬರೆದಿದ್ದಾನೆ. ಇವುಗಳಲ್ಲೆಲ್ಲ ಬಹಳ ಮುಖ್ಯವಾದ ಮತ್ತು ಪ್ರಸಿದ್ಧ ಕೃತಿಗಳೆಂದರೆ ದಿ ನಾಚುರೆಲಿಶೆನ್ ಫ್ಲಾಂಜûನ್ ಫ್ಯಾಮಿಲಿಯೆನ್ (1887-1899) ಮತ್ತು ದಾಸ್ ಫ್ಲಾಂಜûನ್‍ರಿಕ್ ಭಾಗಗಳು 1-102 (1900-1937). ಇವೆರಡನ್ನೂ ತನ್ನ ಸಹೋದ್ಯೋಗಿ ಕಾರ್ಲ್ ಪ್ರಾಂಟ್ಲ್‍ನ ಜೊತೆಗೂಡಿ ಸಂಪಾದಿಸಿದ್ದಾನೆ. ಇವುಗಳಲ್ಲಿ ಮೊದಲ ಪುಸ್ತಕದಲ್ಲಿ ತನ್ನದೇ ಆದ ಸಸ್ಯ ವರ್ಗೀಕರಣದ ತತ್ತ್ವಗಳನ್ನು ಪ್ರತಿಪಾದಿಸಿದ್ದಾನೆ. ಇವು ಮೂಲತಃ ಇವನಿಗಿಂತ ಕೆಲವು ವರ್ಷಗಳ ಹಿಂದೆ ಐಕ್ಲರ್ ಎಂಬ ವಿe್ಞÁನಿಯಿಂದ ಪ್ರತಿಪಾದಿತವಾಗಿದ್ದ ತತ್ತ್ವಗಳ ಮೇಲೆ ರೂಪಿತವಾಗಿದ್ದರೂ ಹಲವಾರು ಅಂಶಗಳಲ್ಲಿ ಬೇರೆಯಾಗಿದ್ದು ಪ್ರಪಂಚದ ಬಹುಪಾಲು ಸಸ್ಯಗಳಿಗೆ ಅನ್ವಯವಾಗುವಂತಿದ್ದುದರಿಂದ ಬಹುಬೇಗ ಇವನ ಸಸ್ಯವರ್ಗೀಕರಣ ವಿಧಾನವನ್ನು ವಿe್ಞÁನಿಗಳು ಬಳಸಲಾರಂಭಿಸಿದರು. ಎಂಗ್ಲರನ ಅಭಿಪ್ರಾಯದಂತೆ ಏಕದಳ ಸಸ್ಯಗಳಲ್ಲಿ ಆರ್ಕಿಡ್ ಸಸ್ಯಗಳು ಹುಲ್ಲಿನ ಜಾತಿಯ ಸಸ್ಯಗಳಿಗಿಂತ ಮುಂದುವರಿದವು ಮತ್ತು ದ್ವಿದಳಸಸ್ಯಗಳಲ್ಲಿ ದಳವಿಲ್ಲದ ಹೂವುಗಳ ಜಾತಿಗಳು ಮತ್ತು ಅಮೆಂಟಿಫೆರಿ ಮುಂತಾದ ವಂಶಗಳು ಅತ್ಯಂತ ವಿಕಾಸಹೊಂದಿವೆ. ಈ ಅಭಿಪ್ರಾಯಗಳನ್ನು ಈಚೆಗೆ ಬಹುಪಾಲು ಸಸ್ಯವಿe್ಞÁನಿಗಳು ಒಪ್ಪಿಕೊಂಡಿಲ್ಲವಾದರೂ ತನ್ನ ವೈಶಾಲ್ಯ, ಸುಸ್ಪಷ್ಟ ಪ್ರತಿಪಾದನೆಯಿಂದಾಗಿ ಎಂಗ್ಲರನ ಸಸ್ಯವರ್ಗೀಕರಣ ವಿಧಾನ ಇಂದು ಹೆಚ್ಚು ಬಳಕೆಯಲ್ಲಿದೆ.

	ಮೇಲೆ ಹೇಳಿದ ಎರಡು ಗ್ರಂಥಗಳಲ್ಲದೆ, 1840-1906 ರ ಅವಧಿಯಲ್ಲಿ 	ಫ್ಲೋರಾ ಬೆಸಿಲಿಯೆನ್ಸಿಸ್, ಎ.ಡಿ. ಕೆಂಡೋಲ್‍ನ ಜೊತೆಗೂಡಿ ಬರೆದ ಮಾನೊಗ್ರಾಫಿಯ ಫೆನೆರೊ ಗೆಮೇರಮ್ ಎಂಬ ಗ್ರಂಥ ಮತ್ತು 1892ರಲ್ಲಿ ಮೊಟ್ಟಮೊದಲು ಪ್ರಕಾಶಿತವಾದ ಸಿಲಬಸ್ ಡರ್ ಫ್ಲಾಂಜûನ್ ಫ್ಯಾಮಿಲಿಯೆನ್ ಎಂಬ ಪುಸ್ತಕಗಳೂ ಪ್ರಸಿದ್ಧವಾಗಿವೆ. ಕೊನೆಯ ಪುಸ್ತಕ ಅಮೂಲ್ಯವಾದ ಪರಾಮರ್ಶ ಗ್ರಂಥವಾಗಿದ್ದು ಹಲವಾರು ಆವೃತ್ತಿಗಳಲ್ಲಿ ಪ್ರಕಾಶಿತವಾಗಿದೆ. ಇವುಗಳೆಲ್ಲ ಅಲ್ಲದೆ ಎಂಗ್ಲರ್ ಹಲವಾರು ಏಕ ವಿಷಯ ಪ್ರಬಂಧಗಳನ್ನೂ ಆಫ್ರಿಕದ ಸಸ್ಯ ಸಂಪತ್ತಿನ ಮೇಲೆ ಪ್ರೌಢ ಪ್ರಬಂಧಗಳನ್ನೂ ಬರೆದಿದ್ದಾನೆ. 1880ರಿಂದ ತನ್ನ ಕೊನೆಗಾಲದವರೆಗೂ ಬೊಟಾನಿಶೆ eóÁಹ್ರ್‍ಬ್ಯೂಹರ್ ಎಂಬ ಸಸ್ಯಶಾಸ್ತ್ರೀಯ ಪತ್ರಿಕೆಯ ಸಂಪಾದಕನಾಗಿಯೂ ಕೆಲಸ ಮಾಡಿದ.
(ಕೆ.ಬಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ